ಯಡ್ರಾಮಿ, ಕಲಬುರಗಿ ಜಿಲ್ಲೆ: ಬಿಜೆಪಿ ನಾಯಕರು ಸೋಷಿಯಲ್ ಮೀಡಿಯಾದಲ್ಲೇ ಮುಳುಗಿರುತ್ತಾರೆ ಅವರಿಗೆ ವಾಸ್ತವದ ಅರಿವಿಲ್ಲ – ಖರ್ಗೆ
ಬಿಜೆಪಿಯವರು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಕೇಳಿದರೆ, ನಾವು ಬದುಕು ಕಟ್ಟುವ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.
ಯಡ್ರಾಮಿ ಪಟ್ಟಣದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ನಮ್ಮ ಸರ್ಕಾರದ ಜನಪರ ಐದು ಗ್ಯಾರಂಟಿ ಯೋಜನೆಗಳನ್ನು ಜಾತಿ ಧರ್ಮದ ಮಿತಿ ದಾಟಿ ಎಲ್ಲರಿಗೂ ತಲುಪಿಸುತ್ತಿರುವುದು ನೋಡಿ ಬಿಜೆಪಿ ನಾಯಕರಿಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಜನರ ತೆರಿಗೆಯ ದುಡ್ಡನ್ನು ಈ ಯೋಜನೆಗಳ ಮೂಲಕ ಮತ್ತೆ ಜನರಿಗೆ ವಾಪಸ್ ಕೊಡುತ್ತಿದ್ದೇವೆ. ಇದಕ್ಕೆ ಬಿಜೆಪಿಗರು ಬಿಟ್ಟಿ ಭಾಗ್ಯ ಎಂದು ಟೀಕಿಸುತ್ತಿದ್ದಾರೆ. ” ಬಿಜೆಪಿಗರು ಬರೀ ವಾಟ್ಸಪ್ ಹಾಗೂ ಇತರೆ ಸೋಷಿಯಲ್ ಮೀಡಿಯಾದಲ್ಲೇ ಮುಳುಗಿರುತ್ತಾರೆ ಅವರಿಗೆ ವಾಸ್ತವ ಗೊತ್ತಿಲ್ಲ. ಬಡತನ, ನಿರುದ್ಯೋಗ, ಬೆಲೆ ಏರಿಕೆ, ರೈತರ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಸಂಸದ ಉಮೇಶ ಜಾಧವ ಅವರೇ ನಿಮ್ಮ ಕುಂಬಕರ್ಣ ನಿದ್ದೆಯಿಂದ ಎದ್ದು ವಾಸ್ತವದ ಕಡೆ ನೋಡಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ 3.50 ಕೋಟಿ ಸಾಲ ಮನ್ನಾ ಮಾಡಲು ಆಗದು ಎಂದ ಬಿಜೆಪಿ ಸರ್ಕಾರ, ಶ್ರೀಮಂತರ 12 ಲಕ್ಷ ಕೋಟಿಸಾಲ ಮನ್ನಾ ಮಾಡಿದೆ. ರಷ್ಯಾ ಯುಕ್ರೇನ್ ಯುದ್ದ ನಿಲ್ಲಿಸಲು ಆಸಕ್ತಿ ತೋರಿಸುವ ಮೋದಿ, ಭೀಕರ ಬರಗಾಲ ಎದುರಿಸುತ್ತಿರುವ ಕರ್ನಾಟಕದಲ್ಲಿ ನರೇಗಾ ಅಡಿಯಲ್ಲಿ ಮಾನವ ದಿನ ಹೆಚ್ಚಿಸಲು ಆಸಕ್ತಿ ತೋರಿಸುತ್ತಿಲ್ಲ. ರೂ 18,171 ಕೋಟಿ ಬರಪರಿಹಾರ ಬಿಡುಗಡೆ ಮಾಡುವಂತೆ ಬೇಡಿಕೆ ಸಲ್ಲಿಸಲಾಗಿದೆ. ಅದಿನ್ನೂ ಬಿಡುಗಡೆಯಾಗಿಲ್ಲ. ಜಾಧವ ಅವರೇ ಈ ಬಗ್ಗೆ ಮಾತನಾಡಿ ಎಂದು ಆಗ್ರಹಿಸಿದರು.
ಕೋಲಿ ಕಬ್ಬಲಿಗ ಸಮಾಜವನ್ನು ಎಸ್ ಟಿ ಗೆ ಸೇರಿಸಲು ಆಗದ ಬಿಜೆಪಿ ನಾಯಕರು ಕಳೆದ ನಾಲ್ಕು ವರ್ಷದಲ್ಲಿ ಕತ್ತೆ ಕಾಯುತ್ತಿದ್ದರೇ? ಈ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ ಎಂದು ಟೀಕಿಸಿದ ಸಚಿವರು, ಅಸಲಿಗೆ ಬಿಜೆಪಿಗೆ ನಾಯಕರೇ ಇಲ್ಲ. ಜಿಲ್ಲಾಧ್ಯಕ್ಷ, ಅಫಜಲಪುರ ಮಾಜಿ ಶಾಸಕ ಹಾಗೂ ಕಲಬುರಗಿ ಸಂಸದ ಎಲ್ಲರೂ ನಮ್ಮ ಪಕ್ಷದವರೇ. ಆ ಪಕ್ಷಕ್ಕೆ ನಾಯಕರನ್ನು ಬೆಳೆಸುವುದು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.
ಕಳೆದ ಸಲ ಚುನಾವಣೆಯಲ್ಲಿ ಖರ್ಗೆ ಸಾಹೇಬರನ್ನು ಸೋಲಿಸಿ ಕೇವಲ ಒಬ್ಬ ವ್ಯಕ್ತಿಯನ್ನು ಕಳೆದುಕೊಂಡಿಲ್ಲ ಬದಲಿಗೆ ಅಭಿವೃದ್ದಿಯನ್ನೇ ಕಳೆದುಕೊಂಡಿದ್ದೇವೆ. ಈ ಸಲ ಮತ್ತೆ ಅಂತ ತಪ್ಪು ಮಾಡಬೇಡಿ. ಹಾಗಾಗಿ, ರಾಧಾಕೃಷ್ಣ ಅವರನ್ನು ಗೆಲ್ಲಿಸುವ ಯುವಕರ ಭವಿಷ್ಯ ಕಾಪಾಡುವ ಹಾಗೂ ಸಂವಿಧಾನವನ್ನು ರಕ್ಷಿಸುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಅಭ್ಯರ್ಥಿ ರಾಧಾಕೃಷ್ಣ ಅವರು ಮಾತನಾಡಿ, ನಾನು ರಾಜಕೀಯದಲ್ಲಿ ಬೆಳೆದಿರುವುದು ಧರಂಸಿಂಗ್ ಹಾಗೂ ಖರ್ಗೆ ಸಾಹೇಬರ ಮಾರ್ಗದರ್ಶನದಲ್ಲಿ. ಜಿಲ್ಲೆಯ ಅಭಿವೃದ್ದಿಯಾಗಬೇಕಾದರೆ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಕೆಕೆಆರ್ ಡಿಬಿ ಅಧ್ಯಕ್ಷ ಹಾಗೂ ಶಾಸಕ ಅಜಯ್ ಸಿಂಗ್ ಮಾತನಾಡಿ, 2013-18 ರ ಒಳಗೆ ಜೇವರ್ಗಿಯಲ್ಲಿ ಬಹಳಷ್ಟು ಅಭಿವೃದ್ದಿಯಾಗಿದೆ.ಆ ನಂತರದ ಬಿಜೆಪಿಯ ಅವಧಿಯಲ್ಲಿ ಅಭಿವೃದ್ದಿ ಕುಂಠಿತಗೊಂಡಿತ್ತು. ಯಾಕೆಂದರೆ, ಅಂದಿನ ಸರ್ಕಾರ ಬಿಜೆಪಿಯೇತರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡಿದ್ದರು. ಈಗ ನಮ್ಮ ಸರಕಾರ ಮತ್ತೆ ಅಧಿಕಾರಕ್ಕೆ ಬಂದಿದೆ. ಮುಂಬರುವ ದಿನಗಳಲ್ಲಿ ಯಡ್ರಾಮಿಯಲ್ಲಿ 100 ಬೆಡ್ ಆಸ್ಪತ್ರೆ ಬರಲಿದೆ. ಜೇವರ್ಗಿ ಕ್ಷೇತ್ರದ 115 ಗ್ರಾಮಗಳಿಗೆ ರೂ 385 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರದಲ್ಲೇ ಜಾರಿಗೊಳ್ಳಲಿದೆ. ಭೀಮಾ ನದಿಯಿಂದ ರೂ 130 ಕೋಟಿ ವೆಚ್ಚದಲ್ಲಿ 20 ಕೆರೆಗಳನ್ನು ತುಂಬಿಸುವ ಯೋಜನೆಗೆ ಅನುಮೋದನೆ ಸಿಕ್ಕಿದೆ.ಮಲ್ಲಾಬಾದ ಏತ ನೀರಾವರಿ ಯೋಜನೆ ಇದೇ ವರ್ಷ ಜಾರಿಗೆ ಬರಲಿದೆ ಹಾಗೂ ಇಜೇರಿಯಿಂದ ಯಡ್ರಾಮಿಯವರೆಗೆ 30 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗುವುದು. ಇದೆಲ್ಲಾ ಯಾಕೆ ಹೇಳಿದೆನೆಂದರೆ ಸಂಸದ ಉಮೇಶ್ ಜಾಧವ ಇಂತಹ ಯಾವುದಾದರೊಂದು ಯೋಜನೆಯನ್ನು ನಮ್ಮ ಕ್ಷೇತ್ರಕ್ಕಾಗಿ ಜಾರಿಗೆ ತಂದಿದ್ದರೆ ಹೇಳಲಿ ಎಂದರು.
ಧರಂ ಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಸಾಹೇಬರ ಪರಿಶ್ರಮದಿಂದಾಗಿ ಈ ಭಾಗದ ಅನುಕೂಲಕ್ಕಾಗಿ ಆರ್ಟಿಕಲ್ 371 J ಜಾರಿಗೆ ಬಂದಿದೆ. ಇದರಿಂದ ಈ ಇಬ್ಬರು ನಾಯಕರನ್ನು ಜನರು ಸದಾ ಕಾಲ ನೆನಪಿನಲ್ಲಿಟ್ಟುಕೊಂಡಿರುತ್ತಾರೆ ಎಂದು ಪ್ರಶಂಸಿಸಿದರು
ಈ ಚುನಾವಣೆ ಬಹಳ ಮುಖ್ಯವಾದ ಚುನಾವಣೆ ಯಾಕೆಂದರೆ ಇಡೀ ದೇಶವೇ ಕಲಬುರಗಿ ಕಡೆ ನೋಡುತ್ತಿದೆ.ಪ್ರತಿಯೊಬ್ಬರು ತಮ್ಮತಮ್ಮ ಬೂತ್ ಮಟ್ಟದಲ್ಲಿ ಪಕ್ಷದ ಅಭ್ಯರ್ಥಿ ಪರ ಹಾಕಿಸಿ ಎಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು
ಸಚಿವರಾದ ಶರಣಪ್ರಕಾಶ ಪಾಟೀಲ್ ಮಾತನಾಡಿ, ಇಬ್ಬರು ಮಹಾನ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂ ಸಿಂಗ್ ಅವರು ಸೋನಿಯಾಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರ ಮನವೊಲಿಸಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಆರ್ಟಿಕಲ್ 371 J ಜಾರಿಗೆ ತಂದರು ಎಂದರು.
ಖರ್ಗೆ ಸಾಹೇಬರು ಸಾಕಷ್ಟು ಅಭಿವೃದ್ದಿ ಮಾಡಿದ್ದರೂ ಕೂಡಾ ಚುನಾವಣೆಯಲ್ಲಿ ಸೋತರು. ಇದಕ್ಕೆ ಮತದಾರರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಲ್ಲಿಂದ ಗೆದ್ದು ಹೋದ ಉಮೇಶ್ ಜಾಧವ ಕಲುಬುರಗಿ ಜಿಲ್ಲೆಗೆ ಏನಾದರೂ ಅಭಿವೃದ್ದಿ ಮಾಡಲು ಆಯ್ತಾ? ಟೆಕ್ಸಟೈಲ್ ಪಾರ್ಕ್, ಪ್ರತ್ಯೇಕ ರೇಲ್ವೆ ವಲಯ ಸೇರಿದಂತೆ ಹಲವಾರು ಮಂಜೂರಾದ ಯೋಜನೆಗಳು ವಾಪಸ್ ಹೋದವು.
ನಾವು ಕೆಲಸ ಮಾಡಿ ಈಗ ಮತಯಾಚನೆ ಮಾಡಲು ಬಂದಿದ್ದೇವೆ. ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿಯಂತ ಜನಪರ ಯೋಜನೆಗಳು ಜಾರಿಗೆ ತರಲಾಗಿದೆ. ಇದು ನಮ್ಮ ಸರ್ಕಾರದ ಬದ್ದತೆ. ಯಾಕೆಂದರೆ ನಮಗೆ ಬಡವರ ಬಗ್ಗೆ ಕಾಳಜಿ ಇದೆ. ಬಿಜೆಪಿಗೆ ಇಂತಹ ಕಾಳಜಿ ಇಲ್ಲ ಹಾಗಾಗಿ ನಮ್ಮ ಯೋಜನೆಗಳ ಬಗ್ಗೆ ಟೀಕಿಸುತ್ತಿದೆ ಎಂದು ಹರಿಹಾಯ್ದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯವನ್ನು ಎತ್ತಿತೋರಿಸಿದ್ದರಿಂದ ಬಿಜೆಪಿ ಹಾಗೂ ಆರ್ ಎಸ್ ಎಸ್ ಸೇರಿ ಪಿತೂರಿ ಮಾಡುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದರು. ಈಗ ಅವರ ಮಾರ್ಗದರ್ಶನದಲ್ಲಿ ರಾಧಾಕೃಷ್ಣ ದೊಡ್ಡಮನಿ ಅವರು ಲೋಕಸಭೆಗೆ ಸ್ಪರ್ಧಿಸಿದ್ದಾರೆ. ಅವರಿಗೆ ಮತ ನೀಡುವ ಮೂಲಕ ಗೆಲ್ಲಿಸಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 25 ಗ್ಯಾರಂಟಿಗಳನ್ನು ದೇಶದಾದ್ಯಂತ ಜಾರಿಗೆ ತರುತ್ತೇವೆ ಎಂದರು.
ಈ ಸಲದ ಎಂ.ಪಿ. ಚುನಾವಣೆಯಲ್ಲಿ ಯಾರು ಲೀಡ್ ಕೊಡುತ್ತಿರೋ ಅವರಿಗೆ ಮುಂಬರುವ ಜಿಲ್ಲಾಪಂಚಾಯತ ಹಾಗೂ ತಾಲೂಕು ಪಂಚಾಯತ ಗಳಿಗೆ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು.
ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ ಕೋಲಿ- ಕಬ್ಬಲಿಗ ಸಮುದಾಯವನ್ನು ಎಸ್ ಟಿ ಗೆ ಸೇರಿಸಲು ಕೇಂದ್ರದ ಬಿಜೆಪಿ ಸರ್ಕಾರ ವಿಫಲವಾಗಿದೆ. ನಮ್ಮ ಸಮುದಾಯದ ಜನರು ಈ ಸಲದ ಎಂ ಪಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕುವ ಮೂಲಕ ಬಹುದಿನದ ಈ ಬೇಡಿಕೆ ಈಡೇರಿಕೆಗೆ ಅನುಕೂಲ ಮಾಡಿಕೊಡಬೇಕು ಎಂದರು.