ಶಹಾಬಾದ್:
ಆರ್ಥಿಕ ಸುಭದ್ರತೆ ಹಾಗೂ ಸ್ವಾಭಿಮಾನದ ಬದುಕಿನ ಭರವಸೆಯನ್ನು ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ನೀಡುತ್ತಿದ್ದೇವೆ. ಇವುಗಳ ಮೂಲಕ ರಾಜ್ಯದಲ್ಲಿ ಬಹಳ ದೊಡ್ಡ ಬದಲಾವಣೆ ತರುತ್ತಿದ್ದೇವೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶಹಾಬಾದ್ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪಕ್ಷಕ್ಕೆ ಯಾವುದೇ ಮುಜುಗರವಾಗದಂತೆ ರಾಜ್ಯದಲ್ಲಿ ಸರ್ಕಾರ ನಡೆಯುತ್ತಿದೆ. ಐದು ಗ್ಯಾರಂಟಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಮತದಾರರ ಮುಂದೆ ನಿಂತು ಈಗ ಆಶೀರ್ವಾದ
ಕೇಳುವ ಎದೆಗಾರಿಕೆ ನಮಗಿದೆ ಎಂದು ಅವರು ಹೇಳಿದರು.
ಬಿಜೆಪಿಗರು ಅಧಿಕಾರದಲ್ಲಿದ್ದಾಗ ಜನರ ದುಡ್ಡು ಅವರ ಜೇಬಿಗೆ ಹೋಗುತ್ತಿತ್ತು. ಈಗ ನಮ್ಮ ಸರ್ಕಾರದ ಅವಧಿಯಲ್ಲಿ ಜನರ ದುಡ್ಡು ಗ್ಯಾರಂಟಿ ಯೋಜನೆಯ ಮೂಲಕ ಮತ್ತೆ ಜನರ ಕೈ ಸೇರುತ್ತಿದೆ. ಎಲ್ಲ ಯೋಜನೆಗಳಿಗೆ ವಾರ್ಷಿಕ 52,000 ಕೋಟಿ ವೆಚ್ಚವಾಗುತ್ತದೆ. ಆದರೂ ಕೂಡಾ ಸರ್ಕಾರ ತನ್ನ ಭರವಸೆಯಿಂದ ಹಿಂದೆ ಸರಿಯುವುದಿಲ್ಲ ಎಂದರು.
ನನ್ನ ಬಗ್ಗೆ ಟೀಕಿಸುವಾಗ ಮಾತ್ರ ಸಂಸದ ಬಾಯಿ ತೆಗೆಯುತ್ತಾರೆ. ಆದರೆ, ಅಭಿವೃದ್ದಿ ವಿಚಾರ ಬಂದಾಗ ಬಾಯಿ ಮುಚ್ಚಿಕೊಂಡಿರುತ್ತಾರೆ. ಕುಂಬಕರ್ಣ ನಿದ್ರೆಯಲ್ಲಿ ಇರುವ ಜಾಧವ ಅವರಿಗೆ ಜನರ ಕಷ್ಟ ಕೇಳಿಸುತ್ತಿಲ್ಲ. ಬೆಲೆಗಳು ಗಗನಕ್ಕೇರಿವೆ. ಹುದ್ದೆಗಳ ಸೃಷ್ಠಿ ಮಾಡುವಲ್ಲಿ ಕೇಂದ್ರ ವಿಫಲವಾಗಿದೆ. ರೈತರ ಸಾಲ ಮನ್ನಾ ಮಾಡಿ ಎಂದರೆ ದುಡ್ಡು ಇಲ್ಲ ಎಂದ ಕೇಂದ್ರ ಸರ್ಕಾರ ಬಂಡವಾಳಗಾರರ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ.
ಬಿಜೆಪಿ ಸರ್ಕಾರ ಜನರ ವಿರೋಧಿ ಆಡಳಿತ ನಡೆಸುತ್ತಿದೆ. GST ಟ್ಯಾಕ್ಸ್ ಎಲ್ಲದರಲ್ಲೂ ಹಾಕಿದ್ದಾರೆ. ಗಾಳಿ ಒಂದನ್ನು ಹೊರತುಪಡಿಸಿ ಎಲ್ಲವಕ್ಕೂ ಟ್ಯಾಕ್ಸ್ ಹಾಕಲಾಗಿದೆ. ಮತ್ತೊಂದು ಕಡೆ ಜಿಲ್ಲೆಗೆ ಬಂದ ಹಲವಾರು ಯೋಜನೆಗಳು ವಾಪಸ್ ಹೋಗಿವೆ. ಕೋಲಿ ಕಬ್ಬಲಿಗ ಸಮಾಜವನ್ನು ST ಗೆ ಸೇರಿಸುತ್ತೇನೆ ಎಂದಿದ್ದ ಜಾಧವ್ ಅವರೇ ಈಗ ಏನು ಮಾಡುತ್ತಿದ್ದೀರಿ ? ನಾನು ಶಹಾಬಾದ್ ಅಭಿವೃದ್ದಿಗೆ ರೂ 20 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇನೆ. ನೀವ್ಹೇನು ಮಾಡಿದ್ದೀರಾ? ಎಂದು ಜಾಧವ ಗೆ ಪ್ರಶ್ನೆಗಳ ಸುರಿಮಳೆಗೈದರು.
ಈ ಸಲದ ಚುನಾವಣೆ ಅಭಿವೃದ್ದಿಯ ಹಿನ್ನೆಲೆಯ ಚುನಾವಣೆಯಾಗಿದೆ. ನನ್ನ ಮುಖ ನೋಡಿ ಓಟು ಹಾಕುವುದಕ್ಕಿಂತ ಜಿಲ್ಲೆಯ ಸಮಗ್ರ ಅಭಿವೃದ್ದಿ ಹಾಗೂ ಸಂವಿಧಾನದ ಸಂರಕ್ಷಣೆಗಾಗಿ ಕಾಂಗ್ರೆಸ್ ಗೆ ಮತ ನೀಡಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಮಾತನಾಡಿ ಈ ಸಲ ಲೋಕಸಭೆ ಚುನಾವಣೆಯಲ್ಲಿ ಶಹಾಬಾದ್ ನಲ್ಲಿ ನನಗೆ ಕನಿಷ್ಠ 10,000 ಮತಗಳ ಲೀಡ್ ಕೊಡಬೇಕು ಎಂದು ಮನವಿ ಮಾಡಿದರು.
ಕೆಕೆಆರ್ ಡಿಬಿ ಅಧ್ಯಕ್ಷ ಡಾ ಅಜಯ್ ಸಿಂಗ್ ಮಾತನಾಡಿ
ಅಬ್ ಕೀ ಬಾರ್ ಚಾರ್ ಸೌ ಪಾರ್ ಎನ್ನುವ ಘೋಷಣೆ ನೋಡಿದರೆ ಇವಿಎಮ್ ಬಿಜೆಪಿಯ ವರ ಮನೆಯಲ್ಲಿ ಇದೆಯಾ? ನೀವು ಏನೇ ಮಾಡಿ ಈ ಸಲ 200 ದಾಟಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿ, ರಾಜ್ಯದಲ್ಲಿ
ಬಿಜೆಪಿಗೆ 10 ಸೀಟು ಬರಲ್ಲ ಎಂದು ಗೊತ್ತಾಗಿರುವುದಕ್ಕೆ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದರು.
ಕಳೆದ ಸಲ ಪುಲ್ವಾಮದಲ್ಲಿ ಯೋಧರು ಬಲಿಯಾದ ಹಿನ್ನೆಲೆ ಇಟ್ಟುಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಈಗ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಹೇಮಂತ್ ಸೊರೆನ್, ಮನೀಷ ಸಿಸೋಡಿಯಾ, ಅರವಿಂದ ಕೇಜ್ರಿವಾಲ ಅವರನ್ನು ಬಂಧಿಸಿದೆ. ಬಿಜೆಪಿಗೆ ಯಾರು ಸೇರುತ್ತಾರೋ ಅವರನ್ನು ರಕ್ಷಿಸುತ್ತಿದೆ. ಅಭಿವೃದ್ದಿ ಕೆಲಸಗಳು ನಿಂತು ಹೋಗಿವೆ, ಉದ್ಯೋಗ ಸೃಷ್ಠಿಗೆ ಆದ್ಯತೆ ನೀಡುತ್ತಿಲ್ಲ.ಇದೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಮತ ನೀಡಬೇಕು. ಈ ಸಲ ಶಹಾಬಾದ್ ನಲ್ಲಿ ಬಿಜೆಪಿಗೆ 4 ಸಾವಿರ ಓಟು ಬೀಳಬಾರದು. ಎಂದರು.
ಸಚಿವ ಶರಣಪ್ರಕಾಶ ಪಾಟೀಲ್ ಮಾತನಾಡಿ, ಕಳೆದ ಸಲ ಬಿಜೆಪಿ ಹಾಗೂ ಆರ್ ಎಸ್ ಎಸ್ ಪಿತೂರಿ ನಡೆಸಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸೋಲಿಸಿವೆ. ಕ್ಷೇತ್ರದಲ್ಲಿ ಅಭಿವೃದ್ದಿ ಕುಂಠಿತಗೊಂಡು ಐದು ವರ್ಷದ ನಂತರ ಜನರಿಗೆ ಅರಿವಾಗಿದೆ. ಈ ಸಲ ಖರ್ಗೆ ಸಾಹೇಬರು ಚುನಾವಣೆಗೆ ನಿಲ್ಲಲು ಒತ್ತಾಯವಿತ್ತು. ಆದರೆ, ದೇಶದ ಎಲ್ಲ ಕ್ಷೇತ್ರಗಳ ಜವಾಬ್ದಾರಿ ಇದ್ದುದರಿಂದ ಅವರ ಬದಲು ರಾಧಾಕೃಷ್ಣ ಅವರು ಅಭ್ಯರ್ಥಿಯಾಗಿದ್ದಾರೆ. ಅವರನ್ನು ಗೆಲ್ಲಿಸಿ ಕಳಿಸಿದರೆ, ಕಲಬುರಗಿ ಸಮಗ್ರ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದರು.
ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ 1.30 ಕೋಟಿ ಮಹಿಳೆಯರಿಗೆ ಪ್ರತಿತಿಂಗಳು 2000 ಕೊಡುತ್ತಿದೆ. ಗೃಹಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಕೊಡಲಾಗುತ್ತಿದೆ. ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ ಪ್ರತಿಯೊಬ್ಬರಿಗೆ 5 ಕೆಜಿ ಅಕ್ಕಿ ಕೊಡುತ್ತಿದ್ದೇವೆ ಜೊತೆಗೆ ಐದು ಕೆಜಿಗೆ ಹಣ ನೇರವಾಗಿ ಕೊಡುತ್ತಿದ್ದೇವೆ. ಯುವನಿಧಿ ಯೋಜನೆಯಡಿಯಲ್ಲಿ ಪದವಿ ಹಾಗೂ ಡಿಪ್ಲೋಮಾ ಆದವರಿಗೆ ಆರು ತಿಂಗಳ ಒಳಗಾಗಿ ನೌಕರಿ ಸಿಗದಿದ್ದರೆ ತಿಂಗಳಿಗೆ 1500 ರಿಂದ 3000 ಕೊಡಲಾಗುತ್ತಿದೆ. ನಮ್ಮ ಪಕ್ಷ ಕೊಟ್ಟ ಮಾತಿನಂತೆ ಈ ಗ್ಯಾರಂಟಿ ಜಾರಿಗೊಳಿಸಿದ್ದೇವೆ. ಜೊತೆಗೆ
ರಾಹುಲ್ ಗಾಂಧಿ ಅವರು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬ ಮಹಿಳೆಗೆ ವಾರ್ಷಿಕ ಒಂದು ಲಕ್ಷ ಕೊಡುತ್ತೇವೆ ಎಂದಿದ್ದಾರೆ. ಆದರೆ,ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲ ಯೋಜನೆಗಳನ್ನು ರದ್ದುಗೊಳಿಸುವುದಾಗಿ ಹೇಳಿದೆ. ಹಾಗಾಗಿ ಈ ಸಲ ನಿಮ್ಮ ಆಯ್ಕೆ ಯಾರು ಆಗಿರಬೇಕು ಎಂದು ನಿರ್ಧರಿಸಿ ಎಂದರು.
ವೇದಿಕೆಯ ಮೇಲೆ ವಸಂತಕುಮಾರ, ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ಅಲ್ಲಮಪ್ರಭು ಪಾಟೀಲ, ಬಸವರಾಜ ಪಾಟೀಲ, ತಿಪ್ಪಣ್ಣಪ್ಪ ಕಮಕನೂರು, ರೇವು ನಾಯಕ ಬೆಳಮಗಿ, ಶರಣಪ್ಪ ಮಟ್ಟೂರು, ಚಂದ್ರಿಕಾ ಪರಮೇಶ್ವರಿ ಸೇರಿದಂತೆ ಹಲವರು ಇದ್ದರು.