ಹೈದರಾಬಾದ್: ತೆಲಂಗಾಣದಲ್ಲಿ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಗುಪ್ತಚರ ದಳದ ಮಾಜಿ ಮುಖ್ಯಸ್ಥ ಟಿ ಪ್ರಭಾಕರ್ ರಾವ್ ಅವರನ್ನು ನಂಬರ್ ಒನ್ ಆರೋಪಿಯನ್ನಾಗಿ ಮಾಡಲಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಫೋನ್ ಕದ್ದಾಲಿಕೆ ವಿಚಾರವಾಗಿ ಭಾರೀ ಗದ್ದಲ ಎದ್ದಿತ್ತು. ಇದೀಗ ರೇವಂತ ರೆಡ್ಡಿ ಸರ್ಕಾರದ ಆದೇಶದ ಮೇರೆಗೆ ನಡೆಸಿದ ತನಿಖೆಯಲ್ಲಿ ಮಾಜಿ ಗುಪ್ತಚರ ಮುಖ್ಯಸ್ಥರ ಹೆಸರು ಆರೋಪಿ ನಂಬರ್ 1 ಆಗಿ ಹೊರಹೊಮ್ಮಿದೆ.
ಈ ಪ್ರಕರಣದಲ್ಲಿ ಹಲವು ಐಪಿಎಸ್ ಅಧಿಕಾರಿಗಳ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಈಗಾಗಲೇ ಮೂವರು ಐಪಿಎಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ. ಫೋನ್ ಕದ್ದಾಲಿಕೆ ಪ್ರಕರಣದ ಆರೋಪಿ ನಂಬರ್ 1 ಟಿ. ಪ್ರಭಾಕರ್ ರಾವ್ ದೇಶದಿಂದ ಹೊರಗಿದ್ದಾರೆ ಎನ್ನಲಾಗಿದ್ದು. ಅವರ ಹೈದರಾಬಾದ್ ನಲ್ಲಿರುವ ನಿವಾಸದ ಮೇಲೆ ಅಧಿಕಾರಿಗಳ ತಂಡ ಶೋಧ ನಡೆಸಿದೆ.
ಸದ್ಯ ಸಿಎಂ ಆಗಿರುವ ಕಾಂಗ್ರೆಸ್ ನಾಯಕ ರೇವಂತ ರೆಡ್ಡಿ ಹಾಗೂ ಬಿಜೆಪಿಯ ಕೆಲವು ನಾಯಕರ ಫೋನ್‌ಗಳನ್ನು ಕದ್ದಾಲಿಕೆ ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಕದ್ದಾಲಿಕೆಗೆ ಬೇಕಾಗುವ ಎಲ್ಲ ಉಪಕರಣಗಳನ್ನು ಇಸ್ರೇಲ್‌ನಿಂದ ತರಿಸಲಾಗಿತ್ತು ಎಂದು ಹೇಳಲಾಗಿದೆ.