ಬೆಂಗಳೂರು: ಇಲ್ಲೊಬ್ಬ ತಂದೆ ಅಕಾಲಿಕ ನಿಧನ ಹೊಂದಿದ ತಮ್ಮ ಪುತ್ರಿ ಹೆಸರಿನಲ್ಲಿ ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಹಸ್ತ ಚಾಚಿದ್ದಾರೆ. 4 ವರ್ಷಗಳ ಕಾಲ ತಮ್ಮೊಂದಿಗಿದ್ದ ಪುತ್ರಿ ಹರ್ಷಾಲಿ ಹೆಸರಿನಲ್ಲಿ ಆಕೆಯ ತಂದೆ ಸಹಾಯಕ ಸಬ್ ಇನ್ಸ್ಪೆಕ್ಟರ್ ಲೋಕೇಶಪ್ಪ ತಮ್ಮ ಒಂದು ತಿಂಗಳ ಸಂಬಳವನ್ನು ಸರ್ಕಾರಿ ಶಾಲೆಯ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಮುಡುಪಿಟ್ಟಿದ್ದಾರೆ.
ಶಿವಾಜಿನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿರುವ ಲೋಕೇಶಪ್ಪ ಹಾಸನ ಜಿಲ್ಲೆಯ ಅರಸೀಕೆರೆಯ ವಾಲೇಹಳ್ಳಿಯವರು. 2005ರಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೆಬಲ್ ಆಗಿ ವೃತ್ತಿ ಆರಂಭಿಸಿದ್ದರು. ಲೋಕೇಶಪ್ಪ ಮತ್ತು ಪತ್ನಿ ಸುಧಾಮಣಿ ದಂಪತಿಗೆ ಹರ್ಷಾಲಿ ಮತ್ತು ಜನ್ಯಸ್ವರ ಎಂಬ ಇಬ್ಬರು ಹೆಣ್ಣು ಮಕ್ಕಳು. 2019ರಲ್ಲಿ ಶಿವಾಜಿನಗರದ ಪೊಲೀಸ್ ವಸತಿ ಸಮುಚ್ಚಯದ ಕಸದ ರಾಶಿಗೆ ಬಿದ್ದಿದ್ದ ಬೆಂಕಿ ತಗುಲಿ ನಾಲ್ಕು ವರ್ಷದ ಹರ್ಷಾಲಿಗೆ ಶೇ.60ರಷ್ಟು ಸುಟ್ಟ ಗಾಯಗಳಾಗಿತ್ತು. 9 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಫಲಕಾರಿಯಾಗದೆ ಹರ್ಷಾಲಿ ಮೃತಪಟ್ಟಿದ್ದಳು.
ಈ ದುರ್ಘಟನೆಯಿಂದ ವಿಚಲಿತಗೊಂಡ ಲೋಕೇಶಪ್ಪ ದಂಪತಿ, ಮಗಳ ಹೆಸರನ್ನು ಚಿರಸ್ಥಾಯಿ ಆಗಿ ಇಡಲು ನಿರ್ಧರಿಸಿ, ಅದೇ ವರ್ಷ ‘ಹರ್ಷಾಲಿ ಫೌಂಡೇಶನ್’ ಸ್ಥಾಪಿಸಿದ್ದರು. ಈ ಮೂಲಕ ಸರ್ಕಾರಿ ಶಾಲೆಯ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದರು. ಅದಕ್ಕಾಗಿ ತಮ್ಮ ಒಂದು ತಿಂಗಳ ವೇತನವನ್ನು ಮೀಸಲಿಟ್ಟಿದ್ದರು. ಅವರ ಸಮಾಜಮುಖೀ ಸೇವೆ ಗಮನಿಸಿದ ಸಹೋದ್ಯೋಗಿಗಳು, ಸಂಬಂಧಿಕರು ಹಾಗೂ ಸ್ನೇಹಿತರು ಕೂಡ ಆರ್ಥಿಕ ನೆರವು ನೀಡಿ ಪ್ರತಿ ವರ್ಷ ಆರು ಸರ್ಕಾರಿ ಶಾಲೆಯ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾಗುವ ಪುಸ್ತಕ, ಪೆನ್ನು, ನೋಟ್ ಬುಕ್ಗಳು ಸೇರಿ ವಿವಿಧ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ.
ಮಗಳ ಸಾವು ಅರಗಿಸಿಕೊಳ್ಳಲು ಸಾಧ್ಯವಿಲ್ಲ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗಳು ಹರ್ಷಾಲಿ ತನ್ನ ಕಂಡು ಅಪ್ಪಾ ಎಂದು ಕೈ ಹಿಡಿದು ಗೋಳಾಡುತ್ತಿದ್ದಳು. ಅದನ್ನು ನಾನು ಇಂದಿಗೂ ಮರೆಯಲು ಸಾಧ್ಯವಿಲ್ಲ. ಸಾವಿಗೂ ಮುನ್ನ ಆಕೆ ಸಾಕಷ್ಟು ನೋವು ಅನುಭವಿಸಿದ್ದಳು. ಮಗಳ ಸಾವಿನ ನಂತರ ಮಾನಸಿಕವಾಗಿ ಕುಗ್ಗಿದ್ದೆ, ನಮ್ಮ ಇನ್ನೊಬ್ಬ ಮಗಳಿಗೆ ಆಗ ಆರು ತಿಂಗಳು. ಈ ಪರಿಸ್ಥಿತಿಯಲ್ಲಿ ನನ್ನ ಹೆಂಡತಿ ನನಗೆ ಧೈರ್ಯ ತುಂಬಿದಳು ಎಂದು ಹೇಳುವಾಗ ಲೋಕೇಶಪ್ಪ ಅವರ ಕಣ್ಣಾಲಿಗಳಲ್ಲಿ ನೀರು ತುಂಬಿತ್ತು.
ಮಗಳ ಹೆಸರಿನಲ್ಲಿ ಏನಾದರೂ ಮಾಡಲೇಬೇ ಕೆಂದು ನಿರ್ಧರಿಸಿ, ಹರ್ಷಾಲಿ ಫೌಂಡೇಷನ್ ಸ್ಥಾಪಿಸಲಾಯಿತು. ನನ್ನ ಮಗಳು ಬದುಕಿದ್ದರೆ ಅವಳ ವಿದ್ಯಾಭ್ಯಾಸಕ್ಕೆ ವರ್ಷಕ್ಕೆ ಕನಿಷ್ಠ 50 ರಿಂದ 70 ಸಾವಿರ ರೂ. ಖರ್ಚು ಮಾಡುತ್ತಿದ್ದೆ. ಅದೇ ಹಣ ವನ್ನು ಈಗ ಬಡ ಮಕ್ಕಳಿಗಾಗಿ ಖರ್ಚು ಮಾಡು ತ್ತೇನೆ. ಪ್ರತಿ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲು, ಅಗತ್ಯವಿರುವ ವಸ್ತುಗಳನ್ನು ಒದಗಿಸುತ್ತೇವೆ. ಐದು ಸರ್ಕಾರಿ ಶಾಲೆಗಳ ಕನಿಷ್ಠ 500-600 ಮಕ್ಕಳು ಇದರಿಂದ ಪ್ರಯೋಜನ ಪಡೆಯುತ್ತಾರೆ ಎಂದು ಲೋಕೇಶಪ್ಪ ಹೇಳಿದರು.
ಯಾವೆಲ್ಲ ಶಾಲಾ ವಿದ್ಯಾರ್ಥಿಗಳಿಗೆ ಸಹಾಯ? :
ಮೈಸೂರು ಜಿಲ್ಲೆಯ ದೊಡ್ಡಹೊಸೂರಿನ ಸರ್ಕಾರಿ ಶಾಲೆ, ಹಾಸನ ಜಿಲ್ಲೆಯ ಜೋಡಿಗುಬ್ಬಿ ಸರ್ಕಾರಿ ಶಾಲೆ, ಜನ್ನವರ ಮತ್ತು ವಾಲೇಹಳ್ಳಿ ಶಾಲೆಗಳು, ಬೆಂಗಳೂರಿನ ಕೊಡಿಗೇಹಳ್ಳಿ ಸರ್ಕಾರಿ ಶಾಲೆ ಮಕ್ಕಳಿಗೆ ನೆರವಾಗುತ್ತಿದ್ದೇವೆ. ನಾನು ಪ್ರತಿ ವರ್ಷ ಸುಮಾರು 70 ಸಾವಿರ ಖರ್ಚು ಮಾಡುತ್ತಿದ್ದರೆ, ನನ್ನ ಕೆಲವು ಸಹೋದ್ಯೋಗಿಗಳು, ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಸೇರಿ ಪ್ರತಿ ವರ್ಷ ಸುಮಾರು 1.5 ಲಕ್ಷ ರೂ.ನಿಂದ 2 ಲಕ್ಷ ರೂ. ವರೆಗೆ ಖರ್ಚು ಮಾಡುತ್ತೇವೆ. ಬೆಂಗಳೂರಿನ ಕೊಡಿಗೇಹಳ್ಳಿ ಸರ್ಕಾರಿ ಶಾಲೆಯಲ್ಲಿ ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದಿಂದ ಬಂದಿರುವ ವಲಸಿಗರ ಮಕ್ಕಳಿದ್ದಾರೆ. 1ರಿಂದ 5ನೇ ತರಗತಿಯವರೆಗಿನ ಅಂತಹ ಮಕ್ಕಳನ್ನು ಆಯ್ಕೆ ಮಾಡಿ ಪೆನ್ಸಿಲ್, ಜ್ಯಾಮಿಟ್ರಿ ಬಾಕ್ಸ್, ಬ್ಯಾಗ್ ಹಾಗೂ ಇತರ ನೋಟು ಬುಕ್ಗಳನ್ನು ಒದಗಿಸುತ್ತಿದ್ದೇವೆ. ಈ ವರ್ಷ ಮತ್ತೂಂದು ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಯೋಚಿಸಿದ್ದೇವೆ ಎಂದು ಲೋಕೇಶಪ್ಪ ಮಾಹಿತಿ ನೀಡಿದರು.