ಲೋಕಸಭಾ ಚುನಾವಣೆ ಸಬಂಧ ಸೋಮವಾರ ತುಮಕೂರಿನಲ್ಲಿ ನಡೆದ ಜಂಟಿ ಸಭೆಯಲ್ಲಿ ಬಿಜೆಪಿ ಮತ್ತು ಜನತಾ ದಳ (ಜಾತ್ಯತೀತ) ಕಾರ್ಯಕರ್ತರು ಪರಸ್ಪರ ಘರ್ಷಣೆಗೆ ಮುಂದಾಗಿದ್ದಾರೆ. ಲೋಕಸಭೆ ಚುನಾವಣೆಗೆ ಕೆಲವೇ ವಾರಗಳಿರುವಾಗ ಮಿತ್ರಪಕ್ಷಗಳ ನಡುವೆ ಬಿರುಕು ಮೂಡಿದ್ದು, ತಮ್ಮ ಮೈತ್ರಿ ಅಭ್ಯರ್ಥಿ ವಿ ಸೋಮಣ್ಣ ಪರ ಪ್ರಚಾರ ಮಾಡಲು ಈ ಸಭೆ ಕರೆಯಲಾಗಿತ್ತು.
ತುಮಕೂರಿನಲ್ಲಿ ಮಾಜಿ ಸಚಿವ ವಿ. ಸೋಮಣ್ಣ ಅವರನ್ನು ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕಿಳಿಸಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ಬಿಜೆಪಿ ನಾಯಕ ಕೊಂಡಜ್ಜಿ ವಿಶ್ವನಾಥ್ ಕಾರಣ ಎಂದು ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದಾಗ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.ವಿಶ್ವನಾಥ್ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಆದರೆ, ನಂತರ ಬಿಜೆಪಿಗೆ ಪ್ರವೇಶಿಸಿದರು. ವಿಶ್ವನಾಥ್ ಮಾತನಾಡಲು ಮುಂದಾದಾಗ ಸೋಮಣ್ಣ ಅವರನ್ನು ತಡೆದರು. ವೇದಿಕೆಯಲ್ಲಿದ್ದ ಬಹುತೇಕ ಜೆಡಿಎಸ್ ಕಾರ್ಯಕರ್ತರು ಕೃಷ್ಣಪ್ಪ ಪರ ನಿಂತರು.
‘2019ರ ಚುನಾವಣೆಯಲ್ಲಿ ಬಿಜೆಪಿಯ ಕೊಂಡಜ್ಜಿ ವಿಶ್ವನಾಥ್ ಅವರು ಅಂದಿನ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಅವರಿಗೆ ಬೆಂಬಲ ನೀಡಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಲ್ಲಿ ಇದ್ದುಕೊಂಡು ನನ್ನ ವಿರುದ್ಧ ಕೆಲಸ ಮಾಡಿದರು. ಈ ಬಾರಿ ಬಿಜೆಪಿ ಅಭ್ಯರ್ಥಿಗೆ ಸಹಕಾರ ನೀಡುತ್ತಾರೆಯೇ ಅಥವಾ ಬೇರೆ ಏನಾದರೂ ಮಾಡುತ್ತಾರೆಯೇ’ ಎಂದು ಕೃಷ್ಣಪ್ಪ ಅವರು ಪ್ರಶ್ನಿಸಿದ್ದು ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿತು.
ವಾಕ್ಸಮರ ತಾರಕಕ್ಕೆ ಏರುತ್ತಿದ್ದಂತೆಯೇ ಕೃಷ್ಣಪ್ಪ ಹೇಳಿಕೆಗೆ ಸಮಜಾಯಿಷಿ ಕೊಡಲು ಮುಂದಾದ ಕೊಂಡಜ್ಜಿ ವಿಶ್ವನಾಥ್ ಅವರನ್ನು ತಡೆದ ವಿ.ಸೋಮಣ್ಣ, ಪರಿಸ್ಥಿತಿ ತಿಳಿಗಿಳಿಸಲು ಮುಂದಾದರು. ‘ಈಗ ಏನೂ ಮಾತನಾಡುವುದು ಬೇಡ’ ಎಂದು ವಿಶ್ವನಾಥ್ ಅವರನ್ನು ವಾಪಸ್ ಕಳುಹಿಸಿದರು. ಇದರಿಂದಾಗಿ ವೇದಿಕೆ ಮೇಲೆಯೇ ಮುಖಂಡರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ವೇದಿಕೆಯ ಮುಂಭಾಗದಲ್ಲಿದ್ದ ಬಿಜೆಪಿಯ ಕಡೇಹಳ್ಳಿ ಸಿದ್ದೇಗೌಡ ಮಾತನಾಡಿ, “ಕೃಷ್ಣಪ್ಪ ಯಾವಾಗಲೂ ಇಂತಹ ದುರಹಂಕಾರದ ಮಾತುಗಳನ್ನು ಆಡುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನು ಕೇಳಿಸಿಕೊಂಡು ವೇದಿಕೆಯಲ್ಲಿದ್ದ ಜೆಡಿಎಸ್‌ನ ವೆಂಕಟಾಪುರದ ಯೋಗೇಶ್ ಅವರು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು. ಎರಡೂ ಪಕ್ಷದ ಮುಖಂಡರನ್ನು ಸಮಾಧಾನ ಪಡಿಸಲು ಸೋಮಣ್ಣ ಯತ್ನಿಸಿದರು.
ಲೋಕಸಭೆ ಚುನಾವಣೆಗೆ ಜೆಡಿಎಸ್-ಬಿಜೆಪಿಯ ರಾಜ್ಯ ನಾಯಕರು ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ, ತಳಮಟ್ಟದ ಕಾರ್ಯಕರ್ತರ ನಡುವೆ ಸೈದ್ದಾಂತಿಕ ಹೊಂದಾಣಿಕೆ ಕಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಅಸಮಾಧಾನ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕು. ಸದ್ಯಕ್ಕೆ ಸಮಸ್ಯೆ ಬಗೆಹರಿದಿದ್ದರೂ, ಚುನಾವಣೆಗೆ ಮುನ್ನ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಒಗ್ಗಟ್ಟು ಮೂಡದೇ ಇರುವುದು ಸೋಮಣ್ಣ ಅವರ ಸಂಕಷ್ಟಕ್ಕೆ ಕಾರಣವಾಗಿದೆ.
ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿ 25 ಸ್ಥಾನಗಳಲ್ಲಿ ಮತ್ತು ಉಳಿದ ಮೂರು ಸ್ಥಾನಗಳಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲಿದೆ. ಆದರೆ, ಜೆಡಿಎಸ್ ಯಾವ ಕ್ಷೇತ್ರಗಳಿಗೂ ಇನ್ನೂ ಅಧಿಕೃತವಾಗಿ ಅಭ್ಯರ್ಥಿ ಹೆಸರು ಘೋಷಣೆ ಮಾಡಿಲ್ಲ.
ಸೀಟು ಹಂಚಿಕೆ ಸೂತ್ರದ ಪ್ರಕಾರ ಜೆಡಿಎಸ್ ಮೂರು ಕ್ಷೇತ್ರಗಳಾದ ಹಾಸನ, ಮಂಡ್ಯ ಮತ್ತು ಕೋಲಾರದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ.
ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗ, ಸಂಸದ ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧಿಸುವ ನಿರೀಕ್ಷೆಯಿದೆ. ಹಾಸನ ದೇವೇಗೌಡರ ತವರು ಕ್ಷೇತ್ರವಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅಖಾಡಕ್ಕಿಳಿಯುವ ಸಾಧ್ಯತೆ ಇದೆ.
ಈ ನಡುವೆ ಬಿಜೆಪಿ 20 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. 24 ಲೋಕಸಭಾ ಸ್ಥಾನಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಕರ್ನಾಟಕ ಲೋಕಸಭೆ ಚುನಾವಣೆಗೆ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.
ಕರ್ನಾಟಕದಲ್ಲಿ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಗೆದ್ದುಕೊಂಡಿದೆ. ಒಟ್ಟಾಗಿ ಚುನಾವಣೆ ಎದುರಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಸ್ಥಾನ ಗಳಿಸಿವೆ.