ಕಲಬುರಗಿ: ಮತದಾನ ದಿನದಂದು ಮತಗಟ್ಟೆ ಮತ್ತು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಯಾವುದೇ ಸಮಸ್ಯೆ ಉದ್ಭವಿಸಿದಲ್ಲಿ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಸೆಕ್ಟರ್ ಅಧಿಕಾರಿಗಳ ಪಾತ್ರ ತುಂಬಾನೆ ಮುಖ್ಯ ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೆಕ್ಟರ್ ಅಧಿಕಾರಿ ಮತ್ತು ಮಾಸ್ಟರ್ ಟ್ರೇನರ್ಗಳಿಗೆ ಆಯೋಜಿಸಿದ ಒಂದು ದಿನದ ತರಬೇತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೆಕ್ಟರ್ ಅಧಿಕಾರಿಗಳಿಗೆ ನೀಡಲಾದ ಜವಾಬ್ದಾರಿ ಬಗ್ಗೆ ಸರಿಯಾಗಿ ಅರಿತು ಕೆಲಸ ಮಾಡಬೇಕು. ಮುಕ್ತ, ನ್ಯಾಯಸಮ್ಮತ ಮತದಾನಕ್ಕೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಮತದಾನ ದಿನದಂದು ಸರಿಯಾದ ಸಮಯಕ್ಕೆ ಮತದಾನ ಜರುಗುವಂತೆ, ಎಲ್ಲಿಯಾದರು ಇ.ವಿ.ಎಂ.ನಲ್ಲಿ ದೋಷ ಕಂಡುಬಂದಲ್ಲಿ ಕೂಡಲೆ ಬದಲಾಯಿಸುವುದು ಸೇರಿದಂತೆ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿ ಹೇಳಿದರು.
ಮಾಸ್ಟರ್ ಟ್ರೇನರ್ ಡಾ.ಶಶಿಶೇಖರ ರೆಡ್ಡಿ ಅವರು ಸೆಕ್ಟರ್ ಅಧಿಕಾರಿ ಮತ್ತು ಮಾಸ್ಟರ್ ಟ್ರೇನರ್ ಗಳಿಗೆ ಸವಿಸ್ತಾರವಾಗಿ ಪಿ.ಪಿ.ಟಿ. ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಕಾರ್ಯಾಗಾರದ ಅಪರಾಹ್ನ ಅಧಿವೇಶನದಲ್ಲಿ ಇ.ವಿ.ಎಂ. ಹ್ಯಾಂಡ್ಸಾನ್ ಟ್ರೇನಿಂಗ್ ಸಹ ಅಧಿಕಾರಿಗಳಿಗೆ ನೀಡಲಾಯಿತು.
ಎಸ್.ಪಿ. ಅಕ್ಷಯ್ ಹಾಕೈ ಅವರು ವಲನರೆಬಲ್, ಕ್ರಿಟಿಕಲ್ ಮತಗಟ್ಟೆಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ಮತ್ತು ಎಂ.ಸಿ.ಸಿ ನೋಡಲ್ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಮಾದರಿ ನೀತಿ ಸಂಹಿತೆ ಪಾಲನೆ ಕುರಿತು ಮಾತನಾಡಿದರು.
ತರಬೇತಿ ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಉಪ ಆಯುಕ್ತ ಮಾಧವ ಗಿತ್ತೆ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.