ಜೇವರ್ಗಿ: ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸರ್ಕಾರದ ಸಾಧನೆಗಳನ್ನು ತಿಳಿಸಬೇಕು. ಆ ಮೂಲಕ ಮತಯಾಚನೆ ಮಾಡಬೇಕು ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮನವಿ ಮಾಡಿದರು.
ಜೇವರ್ಗಿಯ ಮಹೇಬೂಬ್ ಫಂಕ್ಷನ್ ಹಾಲ್ ನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಹಿರಿಯ ನಾಯಕ ದಿ. ಧರಂಸಿಂಗ್ ಅವರನ್ನು ಹಾಗೂ ಈಗ ಅಜಯ್ ಸಿಂಗ್ ಅವರನ್ನು
ಗೆಲ್ಲಿಸಿದಂತೆ ನನಗೂ ಕೂಡಾ ಆಶೀರ್ವಾದ ಮಾಡಿ ಎಂದು ಅವರು ಮನವಿ ಮಾಡಿದರು.
ಎಪ್ಪತ್ತು ವರ್ಷದಲ್ಲಿ ನಾವು ಏನು ಮಾಡಿದ್ದೇವೆ ಎಂದು ತೋರಿಸುತ್ತೇವೆ. ಆದರೆ ಬಿಜೆಪಿಯವರು ಮಾಡಿರುವ ಐದೇ ಐದು ಕೆಲಸ ತೋರಿಸಲಿ ಎಂದು ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಸವಾಲ್ ಹಾಕಿದರು.
ಕಾಂಗ್ರೆಸ್ ನವರು ಏನು ಮಾಡಿಲ್ಲ ಎನ್ನುವ ಜಾಧವ್ ಅವರು, ಓದಿದ್ದು ಕಾಂಗ್ರೆಸ್ ನವರು ಸ್ಥಾಪಿಸಿದ ಕಾಲೇಜಿನಲ್ಲಿ. ಅಲ್ಲದೇ, ಕೆಲಸಕ್ಕೆ ಸೇರಿದ್ದೂ ಕಾಂಗ್ರೆಸ್ ನವರು ಸ್ಥಾಪಿಸಿದ ಆಸ್ಪತ್ರೆಯಲ್ಲಿ. ಕೊನೆಗೆ ಸ್ವಯಂ ನಿವೃತ್ತಿ ಪಡೆದ ನಂತರ ಸೇರಿದ್ದು ಕೂಡಾ ಕಾಂಗ್ರೆಸ್ ಪಕ್ಷದಲ್ಲಿ ಎಂದು ತಿರುಗೇಟು ನೀಡಿ
ದರು.
‘ ಅಬ್ ಕೀ ಬಾರ್ ಉಮೇಶ್ ಜಾಧವ ಕಲಬುರಗಿ ಸೇ ಬಹಾರ್ ‘ ಎಂದು ಘೋಷಿಸಿ ಕುಟುಕಿದ ಸಚಿವರು, ಪ್ರಗತಿ,ಸ್ವಾಭಿಮಾನದ ಬದುಕು,ಯುವಕರ ಕೈಗೆ ಕೆಲಸ ಕೊಡುವುದು ಕಾಂಗ್ರೆಸ್ ನ ಗ್ಯಾರಂಟಿ. ಆದರೆ ಮೋದಿ ಗ್ಯಾರಂಟಿ ಎಂದರೆ ಯುವಕರಿಗೆ ನಿರುದ್ಯೋಗ, ಜನರಿಗೆ ಅನ್ಯಾಯ ಹಾಗೂ ಆರ್ಥಿಕ ಅಧಃಪತನ ಎಂದರು.
ಕಳೆದ ಸಲ ಖರ್ಗೆ ಸಾಹೇಬರನ್ನು ಸೋಲಿಸಿ ಜಿಲ್ಲೆಯ ಸ್ವಾಭಿಮಾನ ಹಾಗೂ ಜನಪರ ಕೆಲಸ ಮಾಡುವವರನ್ನು ಕಳೆದುಕೊಂಡಂತಾಗಿದೆ. ಆದರೆ, ಈ ಸಲ ಹಾಗಾಗಬಾರದು. ನೀವು ರಾಧಾಕೃಷ್ಣ ಅವರನ್ನು ಅಮೂಲ್ಯ ಮತಗಳಿಂದ ಗೆಲ್ಲಿಸಿ. ಆಗ ಲೋಕಸಭೆಯಲ್ಲಿ ರಾಧಾಕೃಷ್ಣ, ರಾಜ್ಯ ಸಭೆಯಲ್ಲಿ ಮಲ್ಲಿಕಾ
ರ್ಜುನ ಖರ್ಗೇ ಹಾಗೂ ವಿಧಾನಸಭೆಯಲ್ಲಿ ಅಜಯ್ ಸಿಂಗ್ ಇರುತ್ತಾರೆ. ಇದು ಟ್ರಿಪ್ಪಲ್ ಅಭಿವೃದ್ದಿಯಾಗಲಿದೆ. ಇದು ಕೂಡಾ ಮೂರು ಗ್ಯಾರಂಟಿನೇ. ಇಂತಹ ಗ್ಯಾರಂಟಿ ಯಾರು ಕೊಡುತ್ತಾರೆ ಹೇಳಿ ? ಎಂದು ಕೇಳಿದರು.
ಕೆಕೆಆರ್ ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್ ಮಾತನಾಡಿ, ಜೇವರ್ಗಿಯಂತ ಪುಣ್ಯಭೂ
ಮಿಯಿಂದ ಕಾಂಗ್ರೆಸ್ ಪ್ರಚಾರ ಆರಂಭಿಸಿದೆ ಎಂದರೆ ಗೆಲುವು ಖಚಿತ ಎಂದರು.
1977 ರಿಂದಲೂ ಜೇವರ್ಗಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. ಈ ಸಲವೂ ಕೂಡಾ ಅತಿ ಹೆಚ್ಚಿನ ಮತಗಳಿಂದ ರಾಧಾಕೃಷ್ಣ ಅವರನ್ನು ಗೆಲ್ಲಿಸುವ ಮೂಲಕ ಆ ಪರಂಪರೆಯನ್ನು ಮುಂದುವರೆಸಿ ಎಂದು ಮನವಿ ಮಾಡಿದರು.
ಸಚಿವರಾದ ಶರಣಪ್ರಕಾಶ ಪಾಟೀಲ ಮಾತನಾಡಿ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಹೋದ ಕಡೆಯೆಲ್ಲ ಸ್ವತಃ ಬಿಜೆಪಿ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರು ಯಾವುದೇ ಅಭಿವೃದ್ದಿ ಕೆಲಸ ಮಾಡದೆ ನೌಟಂಕಿ ಮಾಡುತ್ತಾ ಯಾರಾದರೂ ಸಚಿವರಿಗೆ ಮನವಿ ಕೊಟ್ಟು ಫೋಟೋ ತೆಗೆಸಿಕೊಳ್ಳುವುದು ಅಭ್ಯಾಸವಾಗಿದೆ ಎಂದರು.
ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ಮಾತನಾಡಿ ಬಿಜೆಪಿಯವರು ಮೋದಿ ಮುಖ ನೋಡಿ ಮತ ಹಾಕಿ ಎನ್ನುತ್ತಿದ್ದಾರೆ. ಏನಿದೆ ಮುಖದಲ್ಲಿ? ಹಳಸಿ ಹೋಗಿದೆ. ಹತ್ತು ವರ್ಷದಲ್ಲಿ ಮೋದಿ ಜನರಿಗಾಗಿ ಏನು ಮಾಡಿದ್ದಾರೆ? ಆದರೆ, ನಾವು ಎಷ್ಟೇಕಷ್ಟ ಆದರೂ ಕೂಡಾ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ ಆರ್ಟಿಕಲ್ 371(J) ಜಾರಿಗೆ ತರುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರು ಈ ಭಾಗದ ಜನರ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ಶಾಸಕರಾದ ಎಂ ವೈ ಪಾಟೀಲ ಮಾತನಾಡಿ ಈ ಚುನಾವಣೆ ಪ್ರಮುಖವಾದ ಚುನಾವಣೆಯಾಗಿದೆ.
ಬಿಜೆಪಿಯವರು ಬರೀ ಸುಳ್ಳುಗಳನ್ನು ಹೇಳುವ ಮೂಲಕ ಜನರ ನಡುವೆ ಜಗಳ ಹಚ್ಚುವ ಮೂಲಕ ಚುನಾವಣೆಯನ್ನು ಎದುರಿಸುತ್ತದೆ. ಆದರೆ ನೀವೆಲ್ಲ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಬಿಜೆಪಿಯ ನಿರೀಕ್ಷೆ ಹುಸಿಯಾಗಿಸಬೇಕು ಎಂದರು.
ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ, ದಾಖಲೆಯ ಮತಗಳಿಂದ ರಾಧಾಕೃಷ್ಣ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಮಾತಮಾಡಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರಧಾನಿಯಾಗುವ ಯೋಗ ಬಂದಿದೆ. ಮತದಾರರು ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡ ಮನಿ ಅವರಿಗೆ ಗೆಲ್ಲಿ
ಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಜಿಲ್ಲಾದ್ಯಕ್ಷ ಜಗದೇವ ಗುತ್ತೇದಾರ, ಮಾಜಿಸಚಿವ ರೇವು ನಾಯಕ ಬೆಳಮಗಿ, ಭಾಗನಗೌಡ
ಸಂಕನೂರು, ಸುಭಾಷ ರಾಠೋಡ, ಸೇರಿದಂತೆ ಹಲವರಿದ್ದರು.