ಕಲಬುರಗಿ: ಬೇಸಿಗೆ ತಾಪಮಾನ ಹೆಚ್ಚಾಗಿರುವುದರಿಂದ ಕಲಬುರಗಿ ಮತ್ತು ಬೆಳಗಾವಿ ವಿಭಾಗದ 14 ಜಿಲ್ಲೆಗಳಲ್ಲಿ 2024-25ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿಕಾರರಿಗೆ ನಿಗದಿಪಡಿಸಿದ ಕೆಲಸದ ಪ್ರಮಾಣದಲ್ಲಿ ಶೇ.30ರಷ್ಟು ರಿಯಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ತಿಳಿಸಿದ್ದಾರೆ.
ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ ಶೇ.30 ಹಾಗೂ ಜೂನ್ ಮಾಹೆಯಲ್ಲಿ ಶೇ.20ರಂತೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗಿದೆ. ಹಿರಿಯ ನಾಗರೀಕರು, ವಿಶೇಷ ಚೇತನರು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಈಗಾಗಲೇ ಕೆಲಸದ ಪ್ರಮಾಣದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗಿದ್ದರಿಂದ ಈ ಹೆಚ್ಚುವರಿ ರಿಯಾಯಿತಿಯು ಅವರಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.ಇನ್ನು ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಕಡ್ಡಾಯವಾಗಿ ನೆರಳು, ಶುದ್ಧ ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇತ್ಯಾದಿ ಮೂಲ ಸೌಕರ್ಯಗಳನ್ನು ಕಡ್ಡಾಯವಾಗಿ ಒದಗಿಸಲು ಸರ್ಕಾರದ ಆದೇಶದಲ್ಲಿ ತಿಳಿಸಿದ್ದು, ಅದರಂತೆ ಜಿಲ್ಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.