ಸುರಪುರ: ದೇಶದಲ್ಲಿ ದುರಾಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದ ಕೇಂದ್ರ ಸರಕಾರವನ್ನು ಕಿತ್ತೊಗೆಯಲು ನಮ್ಮ ಭಾರತ ಕಮ್ಯುನಿಸ್ಟ್ (ಸಿಪಿಐ) ಪಕ್ಷ ಈಬಾರಿ ನಮ್ಮ ರಾಷ್ಟ್ರ ನಾಯಕರ ಸೂಚನೆಯಂತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ದೇವಿಂದ್ರಪ್ಪ ಪತ್ತಾರ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿ ವಸಂತ ಮಹಲ್ ಆವರಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ,ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್.ಡಿ.ಎ ಕೇಂದ್ರ ಸರಕಾರ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದೆ.ಜಾತಿ ಧರ್ಮಗಳ ಹೆಸರಿನಲ್ಲಿ ದುರಾಡಳಿತ ನಡೆಸುತ್ತಿದೆ,ರೈತರು ವರ್ಷಗಟ್ಟಲೆ ಹೋರಾಟ ನಡೆಸಿದರು ರೈತ ವಿರೋಧಿ ಕಾಯಿದೆಗಳನ್ನು ರದ್ದುಗೊಳಿಸುತ್ತಿಲ್ಲ,ಪೆಟ್ರೋಲ್ ಡಿಸೆಲ್ ಸೇರಿದಂತೆ ಇಂಧನ ಬೆಲೆ ಗಗನಕ್ಕೇರಿದೆ,ಭ್ರಷ್ಟಾಚಾರ ನಡೆಸುವುದಿಲ್ಲ ಎಂದು ಹೇಳಿಕೆ ನೀಡುತ್ತಿದ್ದ ಬಿಜೆಪಿ ಈಗ ಚುನಾವಣಾ ಬಾಂಡ್ ಹೆಸರಲ್ಲಿ ಜಗತ್ತಿನಲ್ಲಿಯೇ ಅತಿ ದೊಡ್ಡ ಭ್ರಷ್ಟಾಚಾರ ಮಾಡಿದೆ,ಭ್ರಷ್ಟಾಚಾರದ ಮೂಲಕ ಬಿಜೆಪಿ ಆಡಳಿತ ನಡೆಸಿದ 10 ವರ್ಷದಲ್ಲಿಯೇ 18 ಸಾವಿರ ಕೋಟಿ ರೂಪಾಯಿ ಪಕ್ಷದ ಹೆಸರಲ್ಲಿ ಸಂಗ್ರಹಿಸಿದೆ,ಗೋಮಾಂಸದ ಹೆಸರಲ್ಲಿ ಅಮಾಯಕರ ಮೇಲೆ ದರ್ಪ ಮೆರೆಯುತ್ತದೆ,ಆದರೆ ಆಡಳಿತ ನಡೆಸುವವರೆ ಗೋಮಾಂಸ ರಫ್ತು ನಿಲ್ಲಿಸಲಾಗುವುದಿಲ್ಲ ಎಂದು ಹೇಳುತ್ತಾರೆ.
ಇಂದು ವಿಶ್ವಬ್ಯಾಂಕ್‍ಲ್ಲಿ ಮೋದಿಯವರು ಸಾಲ ಕೇಳಲು ಹೋದರೆ ಸಾಲು ಕೊಡುವುದಿಲ್ಲ ದೇಶ ದಿವಾಳಿಯಾಗಿದೆ ಎನ್ನುತ್ತಾರೆ, ಹಿಂದು,ಮುಸ್ಲಿಂ ಗಂಡು ಹೆಣ್ಣು ಒಂದಾಗಿ ಹೋದರೆ ನೈತಿಕ ಪೊಲೀಸ್ ಗಿರಿ ನಡೆಸಲಾಗುತ್ತದೆ,ಮುಸ್ಲೀಂ ಸಮುದಾಯದವರು ದೇವಸ್ಥಾನಗಳ ಬಳಿ ವ್ಯಾಪಾರ ಮಾಡುವಂತಿಲ್ಲ ಎಂದು ನೈತಿಕ ಪೊಲೀಸ್ ಗಿರಿ ಮಾಡುತ್ತಾರೆ,ಮಾತು ಎತ್ತಿದರೆ ದೇಶದಲ್ಲಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿ ದೇಶದಲ್ಲಿ ಮನುವಾದ ಜಾರಿಗೊಳಿಸುವ ಹುನ್ನಾರ ನಿರಂತರವಾಗಿ ನಡೆಯುತ್ತಿದೆ,ಆದರೆ ತೋರಿಕೆಗೆ ದೇಶಪ್ರೇಮದ ಹೇಳಿಕೆ ನೀಡುತ್ತಾರೆ,ಆದರೆ ದೇಶ ವಿರೋಧಿ ಕೆಲಸಗಳನ್ನೆ ಮಾಡುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಇದೇ ಕಾರಣ ದಿಂದ ನಮ್ಮ ಭಾರತ ಕಮ್ಯುನಿಸ್ಟ್ ಪಕ್ಷ ಈಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಿದ್ದು,ಲೋಕಸಭಾ ಚುನಾವಣೆಯಲ್ಲಿ ಜಿ.ಕುಮಾರ ನಾಯಕ ಹಾಗೂ ವಿಧಾನಸಭಾ ಉಪ ಚುನಾವಣೆಯಲ್ಲಿ ರಾಜಾ ವೇಣುಗೋಪಾಲ ನಾಯಕ ಅವರಿಗೆ ಬೆಂಬಲಿಸುವ ಮೂಲಕ ಅವರ ಗೆಲುವಿಗೆ ಶ್ರಮಿಸಲಿದೆ ಎಂದು ಘೋಷಿಸಿದರು.